ಟ್ರಿಟಿಯಮ್
	ಹೈಡ್ರೊಜನ್ನಿನ ಸಮಸ್ಥಾನಿಗಳ ಪೈಕಿ ಭಾರತಮವಾದದ್ದು. ಅಲ್ಲದೆ ಇದೊಂದೇ ವಿಕಿರಣಪಟುವಾದ ಸಮಸ್ಥಾನಿ. ಹೈಡ್ರೊಜನ್ನಿನ ಸಮಸ್ಥಾನಿಗಳು ಮೂರು : ಪ್ರೋಟಿಯಮ್, ಡ್ಯೂಟೀರಿಯಮ್, ಟ್ರಿಟಿಯಮ್. ಟ್ರಿಟಿಯಮ್ಮಿನ ನ್ಯೂಕ್ಲಿಯಸಿನಲ್ಲಿ ಒಂದು ಪ್ರೋಟಾನ್ ಮತ್ತು ಎರಡು ನ್ಯೂಟ್ರಾನುಗಳಿವೆ. ಇದರ ಪರಮಾಣು ತೂಕ 3. ನೈಸರ್ಗಿಕ ಹೈಡ್ರೊಜನ್ನಿನಲ್ಲಿ ಟ್ರಿಟಿಯಮ್ ಬಲು ಅಲ್ಪ ಪ್ರಮಾನದಲ್ಲಿರುವುದು. ಅಲ್ಲದೆ ಇದರ ವಿಕಿರಣಪಟುತ್ವದಿಂದಾಗಿ ಇದು ನಿಸರ್ಗದಲ್ಲಿ ದೊರೆಯುವ ಪ್ರಮಾಣ ಅತ್ಯಲ್ಪ. ವಾಯುಮಂಡಲದ ಮೇಲ್ಭಾಗದಲ್ಲಿ ವಿಶ್ವಕಿರಣಗಳ ಕ್ರಿಯೆಯಿಂದ ಹೊರಹೊಮ್ಮುವ ಅತ್ಯಂತ ವೇಗದ ನ್ಯೂಟ್ರಾನುಗಳು ವಾಯುವಿನಲ್ಲಿರುವ ನೈಟ್ರೊಜನ್ನಿನ ಮೇಲೆ ಮಾಡುವ ತೀವ್ರಘಾತದ ಪರಿಣಾಮವಾಗಿ ಟ್ರಿಟಿಯಮ್ ಜನಿಸುತ್ತದೆ.

	1934ರಲ್ಲಿ ಮೊತ್ತಮೊದಲು ಡ್ಯೂಟಿರಿಯಮ್ ಸಂಯುಕ್ತಗಳ ಮೇಲೆ ಅತಿ ಶಕ್ತಿಯ ಡ್ಯೂಟಿರಾನುಗಳ ತೀವ್ರಘಾತ ನeಡೆಸಿ ಟ್ರಿಟಿಯಮ್ಮನ್ನು ತಯಾರಿಸಲಾಯಿತು. ಈಚೆಗೆ ಇದನ್ನು ಪರಮಾಣು ಕುಲುಮೆಗಳಲ್ಲಿ ಲೀಥಿಯಮ್ಮಿನ ಸಮಸ್ಥಾನಿಯ ಮೇಲೆ ನ್ಯೂಟ್ರಾನುಗಳ ತೀವ್ರಘಾತಕ್ಕೆ ಗುರಿಪಡಿಸಿ ತಯಾರಿಸುತ್ತಿದ್ದಾರೆ. ಈ ರೀತಿ ತಯಾರಾದ ಟ್ರಿಟಿಯಮ್ಮನ್ನು ಯುರೇನಿಯಮ್ ಲೋಹದ ಮೇಲೆ ಮಂದಗಟ್ಟುವಂತೆ ಮಾಡುತ್ತಾರೆ. ಯುರೇನಿಯಮ್ ಲೋಹವನ್ನು ಕಾಸಿದಾಗ ಈ ಅನಿಲ ವಿಮೋಚನೆಗೊಳ್ಳುತ್ತದೆ. ಟ್ರಿಟಿಯಮ್ಮಿನ ನ್ಯೂಕ್ಲಿಯಸ್ ಅಸ್ಥಿರವಾದ್ದರಿಂದ ಇದು ವಿಕಿರಣವನ್ನು ಸೂಸುತ್ತದೆ. ಎಂದರೆ, ಇದರ ನ್ಯೂಕ್ಲಿಯಸಿನಿಂದ ತನ್ನಷ್ಟಕ್ಕೆ ತಾನೇ ಎಲೆಕ್ಟ್ರಾನ್ (ಬೀಟಕಣ) ಹಾಗೂ ಹೀಲಿಯಮ್ಮಿನ ಕಣಗಳು ಸಿಡಿಯುತ್ತವೆ. ಟ್ರಿಟಿಯಮ್ಮಿನ ಅರ್ಧಾಯು ಹನ್ನೆರಡು ವರುಷ ಐದು ತಿಂಗಳು. ಇದನ್ನು ವೈಜ್ಞಾನಿಕ ಅಧ್ಯಯನಗಳಲ್ಲಿಯೂ ಯಾವುದೇ ರಾಸಾಯನಿಕ ಕ್ರಿಯೆಯ ಒಳಗಡೆ ನಡೆಯುವ ಪ್ರತಿಕ್ರಿಯೆಗಳ ಪರೀಕ್ಷಣದಲ್ಲಿಯೂ ಪಥನಿರ್ದೇಶಕದಂತೆ ಬಳಸಲಾಗುತ್ತದೆ. ಅಲ್ಲದೇ ಇದನ್ನು ಹೈಡ್ರೊಜನ್ ಬಾಂಬುಗಳ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ.
(ವಿ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ